ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ…

ಸ್ನೇಹಿತರೆ,

ಕರ್ನಾಟಕದ ಮುಖ್ಯವಾಹಿನಿ ಮಾಧ್ಯಮದಲ್ಲಿ ಅಸಹನೀಯವಾದ ವಾತಾವರಣ ಸೃಷ್ಟಿಯಾಗಿರುವುದು ಈ ರಂಗದಲ್ಲಿರುವವರಿಗೆ ಮತ್ತು ಅದನ್ನು ಗಮನಿಸುತ್ತಿರುವವರಿಗೆ ತಿಳಿದಿರುವ ವಿಚಾರವಷ್ಟೆ. ಇಂತಹ ಪರಿಸ್ಥಿತಿಯಲ್ಲಿ ಈ ರಂಗದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಮತ್ತು ಹಿರಿಯ ಪತ್ರಕರ್ತರು ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸುವ ಮೂಲಕ ಆ ಬಗೆಗಿನ ವಿಚಾರವನ್ನು ಚರ್ಚೆಗೊಡ್ಡೋಣ ಎಂದು ಈ ಪತ್ರ ಬರೆಯುತ್ತಿದ್ದೇನೆ.

byraghavendra-affidavit

ನಾನು ಮೂರ್ನಾಲ್ಕು ದಿನಗಳ ಹಿಂದೆ “Third-rate frauds in politics” ಎಂಬ ಈ ಲೇಖನ ಬರೆಯುವ ಸಂದರ್ಭದಲ್ಲಿ ಅಲಂ ಪಾಷ ಅವರನ್ನು ಕೇಳಿ ಖಚಿತಪಡಿಸಿಕೊಂಡೇ ಒಂದು ವಿಚಾರ ಬರೆದಿದ್ದೆ. ಅದರಲ್ಲಿ ಸಚಿವ ನಿರಾಣಿ ಮೀಟಿಂಗ್ ಒಂದರಲ್ಲಿ ಅವರ ಮೇಲೆ ಈಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಪಾಷ ಅವರಿಗೆ, “ನಾನು ಸಮಯ ಚಾನೆಲ್ಲಿನ ಮಾಲಿಕ. ನಿನ್ನ ಬಗ್ಗೆ ಅಲ್ಲಿ ಕವರ್ ಮಾಡಿಸಬಲ್ಲೆ. ನಿನ್ನ ಹಗರಣಗಳನ್ನೂ ಬಯಲಿಗೆ ಎಳೆಯಬಲ್ಲೆ,” ಎಂದು ಎಚ್ಚರಿಕೆ ಕೊಟ್ಟಿದ್ದರು. ಪಾಷಾ ಅವರಿಂದ ಈ ಮಾತನ್ನು ನಾನು ಕೋಟ್ ಮಾಡಬಹುದು ಎಂದು ಒಪ್ಪಿಗೆ ಪಡೆದುಕೊಂಡೇ ಅಲ್ಲಿ ಪ್ರಸ್ತಾಪಿಸಿದ್ದೆ.

ನೆನ್ನೆ ನಾನು ಬೆಳಗ್ಗೆ ಏಳಕ್ಕೆ ಬೆಂಗಳೂರಿನಿಂದ ಹಿರಿಯೂರಿಗೆ ಹೋಗುವ ಕೆಲಸ ಇತ್ತು. ಬಂದಿದ್ದು ರಾತ್ರಿ. ಬಂದ ಮೇಲೆ ಸ್ನೇಹಿತರಿಂದ ವಿಚಾರ ತಿಳಿಯಿತು. ಏನೆಂದರೆ, ಸಮಯ ಚಾನಲ್‌ನಲ್ಲಿ ನಿರಾಣಿ ಎಚ್ಚರ ಕೊಟ್ಟಿದ್ದಕ್ಕೆ ಪೂರಕವಾಗಿ ಅಲಂ ಪಾಷಾ ವಿರುದ್ಧ ಕಾರ್ಯಕ್ರಮ ಪ್ರಸಾರವಾಯಿತೆಂದು.

ಇಲ್ಲಿ ನಾನು ಪಾಷಾರವರ ಪರವಹಿಸಿಕೊಂಡು ಮಾತನಾಡಲಾರೆ. ಪಾಷಾ ಸಹ ಈ ಹಿಂದೆ ಭ್ರಷ್ಟ ಮಾರ್ಗ ಹಿಡಿದಿದ್ದರೆ ಅವರ ವಿಚಾರಣೆಯಾಗಿ ಶಿಕ್ಷೆಯಾಗಲಿ. ಅದಕ್ಕೆ ಯಾವ ರೀತಿಯಿಂದಲೂ ನನ್ನ ಅಕ್ಷೇಪಣೆ ಇಲ್ಲ.

ಆದರೆ, ಈ ಒಂದು ಸಂದರ್ಭದಲ್ಲಿ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಏನು ಮಾಡುತ್ತಿವೆ, ಎನ್ನುವುದು ನನ್ನ ಎದುರಿರುವ ಪ್ರಶ್ನೆ.

ಸಚಿವ ನಿರಾಣಿ ಹೀಗೆ ಮೀಟಿಂಗ್ ಒಂದರಲ್ಲಿ ಹೇಳಿದ್ದು, ಅದಾದ ಕೆಲ ದಿನಗಳಲ್ಲಿ ಪಾಷಾ ವಿರುದ್ಧ ಕಾರ್ಯಕ್ರಮ ಬರುವುದು, ಇಲ್ಲಿರುವ ವಿವಿಧ ಆಯಾಮಗಳೇನು, ಕೋನಗಳೇನು, ಸಮಯ ಚಾನಲ್‌ನಲ್ಲಿ ಮಾತ್ರ ಯಾಕೆ ಈ ಕಾರ್ಯಕ್ರಮ ಬರುತ್ತದೆ, ಬೇರೆಯದರಲ್ಲಿ ಯಾಕೆ ಬರುವುದಿಲ್ಲ, ಅಲ್ಲಿ ಬಹುಶಃ ಅಧಿಕೃತವಾಗಿ ಯಾವುದೇ ಮಾಲಿಕತ್ವ ಹೊಂದಿರದ ನಿರಾಣಿ ಹೇಗೆ ಆ ಚಾನಲ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,.. ಇವೆಲ್ಲವನ್ನು ಯಾಕೆ ನಮ್ಮ ರಾಜ್ಯಮಟ್ಟದ ದಿನಪತ್ರಿಕೆಗಳು ಕೈಗೆತ್ತಿಕೊಳ್ಳುವುದಿಲ್ಲ? ಒಂದು ಮಾಧ್ಯಮ ಸಂಸ್ಥೆ ಇನ್ನೊಂದು ಮಾಧ್ಯಮ ಸಂಸ್ಥೆಯನ್ನು ವಿಮರ್ಶಿಸಬಾರದು ಎನ್ನುವುದು ಅದೆಂತಹ ಘನ ಮೌಲ್ಯ? ನಮ್ಮ ಹುಳುಕುಗಳನ್ನು ಅವರು ಎತ್ತುವುದಿಲ್ಲ, ಅವರ ಹುಳುಕುಗಳನ್ನು ನಾವು ಎತ್ತುವುದಿಲ್ಲ ಎನ್ನುವ ಅಲಿಖಿತ ನಿಯಮ ನಿಮಗೆ ಅದೆಂತಹ ನೈತಿಕತೆ ಕೊಡುತ್ತದೆ?

ನೀವು ಅದನ್ನು ಟ್ಯಾಬ್ಲಾಯ್ಡ್ ಪತ್ರಿಕೆಗಳ ರೀತಿಯೇ ಬರೆಯಬೇಕಿಲ್ಲ. ಗಂಭೀರವಾಗಿ, ಪ್ರಬುದ್ಧವಾಗಿಯೇ ಬರೆಯಬಹುದಲ್ಲ? ಯಾಕೀ ವೃತ್ತಿಮೋಸ?

ಇಲ್ಲಿ ಮಾಧ್ಯಮ ಸಂಸ್ಥೆಗಳಷ್ಟೇ ಅಲ್ಲ, ಪತ್ರಕರ್ತರು, ಪ್ರೆಸ್‌ಕ್ಲಬ್, ಪತ್ರಕರ್ತರ ಸಂಘಗಳು, ಇವೆಲ್ಲರೂ/ವೂ ಒಂದು ರೀತಿಯ ಬೇಜವಾಬ್ದಾರಿತನದಲ್ಲಿ ಇಲ್ಲವೆ ಪುಕ್ಕಲುತನದಲ್ಲಿ ವರ್ತಿಸುತ್ತಿದ್ದಾರೆ. ವಿಶೇಷವಾಗಿ, ತಮ್ಮದೇ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಅನ್ಯಾಯವಾದಾಗ ಅವರಿಗೆ ಬೆಂಬಲ ಕೊಡುವುದು, ಅವರ ಪರ ಹೋರಾಡುವುದು, ಅಂತಹ ವ್ಯವಸ್ಥಿತ ವ್ಯವಸ್ಥೆ/ಸಂಸ್ಥೆಯೊಂದನ್ನು ಕಟ್ಟಿಕೊಳ್ಳುವುದು ಇವರ ಕೈಯ್ಯಲ್ಲಿ ಸಾಧ್ಯವೇ ಆಗಿಲ್ಲ. ಜೊತೆಗೆ ಮೌಲ್ಯ, ಆದರ್ಶ, ನಿಷ್ಠುರತೆ ಇರುವಂತಹವರು ಅಲ್ಲಿ ಮುಖ್ಯಸ್ಥಾನಗಳಲ್ಲಿ ಇದ್ದಂತೆಯೂ ಕಾಣಿಸುತ್ತಿಲ್ಲ. ಅಧಿಕಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕಾಗಿ ಹಪಹಪಿಸುವ ಜನರೆ ಅಲ್ಲಿಯೂ ತುಂಬಿದ್ದಾರೆ ಎನಿಸುತ್ತದೆ. ಇದನ್ನು ಆಪಾದನೆ ಎಂದುಕೊಂಡರೂ ಸರಿಯೇ, ಕನ್ನಡದ/ಕರ್ನಾಟಕದ ಮಿತ್ರರು ನನ್ನ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಶಿಸುತ್ತೇನೆ.

ಮೇಲಿನ ಮಾತಿಗೆ ಫೂರಕವಾಗಿ ನಾನು ಇಲ್ಲಿ ಪುದುವೆಟ್ಟುರವರ ಸಂಗತಿ ಪ್ರಸ್ತಾಪಿಸುತ್ತೇನೆ. ನಾವು ವರ್ತಮಾನದಲ್ಲಿ ದಾಖಲೆ ಸಮೇತ ಪ್ರಕಟಿಸಿದ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ಲೇಖನದಲ್ಲಿನ ವಿಚಾರವನ್ನು ತಿಂಗಳ ಹಿಂದೆಯೇ ಸುರೇಶ್ ಪುದುವೆಟ್ಟು ಎನ್ನುವ ಪತ್ರಕರ್ತರು ಉದಯವಾಣಿಯಲ್ಲಿ ಬರೆದಿದ್ದರು. ಆ ಸಮಯದಲ್ಲಿ ಸುರೇಶ್ ಪುದುವೆಟ್ಟುರವರ ಪತ್ನಿ ಮಾನಸ ಪುದುವೆಟ್ಟು ಸಮಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಲೇಖನ ಪ್ರಕಟವಾದ ತಕ್ಷಣ ಮಾನಸರವರಿಗೆ ಸಮಯ ಟಿವಿಯಲ್ಲಿ “ಹೀಗೆಲ್ಲ ಮಾಡಬಾರದು,” ಎನ್ನುವ ಎಚ್ಚರಿಕೆ ಕೊಟ್ಟು ದೂರದ ಗುಲ್ಬರ್ಗಕ್ಕೆ ವರ್ಗ ಮಾಡಿದರು. ಆ ಶಿಕ್ಷೆ ಭರಿಸಲಾಗದೆ ಮಾನಸ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಇಲ್ಲಿ ಮತ್ತೊಮ್ಮೆ ಗಮನಿಸಬೇಕಾದ ಅಂಶ, ಮಾನಸರವರ ಗಂಡ ಬೇರೆ ಪತ್ರಿಕೆಯಲ್ಲಿ ನಿರಾಣಿ ವಿರುದ್ಧ ಬರೆದಿದ್ದಕ್ಕೆ ಇಲ್ಲಿ ಇವರಿಗೆ ಶಿಕ್ಷೆ. ಇದು ಯಾವ ನಿಯಮ, ನೈತಿಕತೆ, ವೃತ್ತಿಮೌಲ್ಯ? ಈ ವಿಷಯವನ್ನು ನಾನು ಊಹಾಪೋಹಗಳ ಆಧಾರದ ಮೇಲೆ ಬರೆಯಲಿಲ್ಲ. ಸುರೇಶ್ ಪುದುವೆಟ್ಟುರವರಿಗೆ ಪೋನ್ ಮಾಡಿ ವಿಷಯ ಖಚಿತಪಡಿಸಿಕೊಂಡೇ ಬರೆದೆ. ಈ ವಿಷಯವನ್ನು ಪತ್ರಕರ್ತರು ಯಾಕೆ ಕೈಗೆತ್ತಿಕೊಳ್ಳಲಿಲ್ಲ? ಇದೊಂದು ಸಹಿಸಬಾರದ ವಿದ್ಯಮಾನ ಎಂದು ಯಾಕೆ ಎಂದುಕೊಳ್ಳಲಿಲ್ಲ? ಇಲ್ಲಿರುವ ಎಲ್ಲರೂ ಕೇವಲ ಜೀವನೋಪಾಯಕ್ಕೆ ದುಡಿಯುತ್ತಿರುವ ಕೂಲಿಗಳೇ, ಅಥವ ಅವರಿಗೂ ಸ್ವತಂತ್ರ ಆಲೋಚನೆ ಮತ್ತು ತಮ್ಮ ವೃತ್ತಿಬಾಂಧವರಿಗೆ ಅನ್ಯಾಯವಾದಾಗ ಅವರ ಪರ ನಿಲ್ಲಬೇಕು ಎನ್ನುವ ನಿಷ್ಠೆ ಇದೆಯೆ?

ಮತ್ತು, ತಮ್ಮದೇ ರಂಗ ಅವ್ಯವಹಾರ ಮತ್ತು ಅನೀತಿಯುಕ್ತ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಅದನ್ನು ವಿಮರ್ಶಿಸಬಾರದು ಎನ್ನುವಷ್ಟು ಬೌದ್ಧಿಕ ದಿವಾಳಿತನ ಇಲ್ಲಿದೆಯೆ? Shameful.

ನಿಜಕ್ಕೂ ಇಲ್ಲಿ ಒಂದು ಹೊತ್ತಿನ ತುತ್ತಿಗೆ ಪರದಾಡುತ್ತಿರುವವರು ಮಾತ್ರವೇ ದುಡಿಯುತ್ತಿದ್ದಾರೆಯೆ? ನಿಮಗೆ ಅಷ್ಟು ಬಡತನವೆ ಅಥವ ಅದು ಇನ್ನೊಂದು ತರಹದ ದಾರಿದ್ತ್ರವೆ? ಏನದು?

ಇಲ್ಲಿ ಇನ್ನೊಂದು ವಿಷಯ. ನಾನು ಪತ್ರಕರ್ತ ಅಲ್ಲ. ಈಗಲೂ ನಾನು ಜೀವನೋಪಾಯಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೇ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ, ಇದನ್ನು ನಾನು ನನ್ನ ವೃತ್ತಿಬಾಂಧವರ ಪರ ಎತ್ತಬೇಕಿರುವ ವಿಷಯ ಎಂದು ಎತ್ತುತ್ತಿಲ್ಲ. ಇಲ್ಲಿ, ಪತ್ರಿಕಾರಂಗದಲ್ಲಿ, ಒಂದಷ್ಟು ಕೊಳೆತು ನಾರುತ್ತಿದೆ, ಅಸಮರ್ಥರು, ಅನರ್ಹರು ಈ ರಂಗದಲ್ಲೂ ಮುಂಚೂಣಿಗೆ ಬಂದಿದ್ದಾರೆ, ಮತ್ತು ಅವರಲ್ಲಿ ಅಂತಹ ಹೇಳಿಕೊಳ್ಳುವ ಮೌಲ್ಯಗಳಾಗಲಿ, ಅನ್ಯಾಯದ ವಿರುದ್ಧ ಹೋರಾಡಲೇಬೇಕೆಂಬ ಬದ್ಧತೆಯಾಗಲಿ, ಬಹಳಷ್ಟು ಜನರಿಗೆ ಇಲ್ಲ ಎಂದು ಪ್ರಸ್ತಾಪಿಸುವುದಕ್ಕೆ ಎತ್ತುತ್ತಿದ್ದೇನೆ. ನಮ್ಮ ಮಾಧ್ಯಮ ರಂಗವೇ ಭ್ರಷ್ಟವಾಗುತ್ತಿರುವಾಗ ಅದು ಸಮಾಜದಲ್ಲಿ ಸೃಷ್ಟಿಸುವ ಅಭಿಪ್ರಾಯಗಳಿಗೆ ಯಾವ ಮೌಲ್ಯಗಳಿರುತ್ತವೆ, ಮತ್ತು ಅದು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದೇ ನನ್ನ ಭಯ. ಇದನ್ನು ಒಬ್ಬ ಬಾಧ್ಯಸ್ಥ ಪ್ರಜೆಯಾಗಿ, ಸಮುದಾಯದ ಹಿತದೃಷ್ಟಿಯಿಂದ ಪ್ರಸ್ತಾಪಿಸುತ್ತಿದ್ದೇನೆ—ಇತರೆ ಸಮಾಜಸಂಬಂಧಿ ವಿಷಯಗಳ ಬಗ್ಗೆ ಬರೆಯುವಂತೆ. ಇದನ್ನು ಎತ್ತುವ ಮೂಲಕ ವ್ಯವಸ್ಥೆಯೂ ಸರಿಹೋಗುತ್ತ ಹೋಗಬಹುದು ಎನ್ನುವ ಆಸೆ.

ಈ ಲೇಖನವನ್ನು ಇನ್ನೂ ವಿಸ್ತಾರವಾಗಿ ಅಥವ ಇನ್ನೂ ಹೆಚ್ಚು ತರ್ಕಬದ್ಧವಾಗಿ ಬರೆಯಬೇಕಿತ್ತು. ಆದರೆ, ಮುಂದಿನ ನಾಲ್ಕೈದು ದಿನ ನಾನು ಊರಿನಲ್ಲಿ ಇರದೇ ಇರುವುದರಿಂದ ಮತ್ತು ಅಂತರ್ಜಾಲದಿಂದ ದೂರ ಇರುವುದರಿಂದ ಈ ವಿಷಯವನ್ನು ಕೂಡಲೆ ಪ್ರಸ್ತಾಪಿಸೋಣ ಎಂದು  ಬರೆದಿದ್ದೇನೆ. ಇತರೆ ಪತ್ರಕರ್ತ ಸ್ನೇಹಿತರು ಈ ವಿಷಯವನ್ನು ಇಟ್ಟುಕೊಂಡು ಚರ್ಚೆ ಮುಂದುವರೆಸುತ್ತಾರೆ ಎಂದು ಬಯಸುತ್ತೇನೆ.

ಬಯಸುತ್ತೇನೆ, ಅಷ್ಟೇ. ಅದು ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಅದು ಉಳಿದಿಲ್ಲ. ಕ್ಷಮಿಸಿ.

ಆದರೂ…

ನಮಸ್ಕಾರ,
ರವಿ ಕೃಷ್ಣಾ ರೆಡ್ಡಿ

10 thoughts on “ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ…

  1. Ananda Prasad

    ನಮ್ಮ ಮುಖ್ಯ ವಾಹಿನಿಯ ಮಾಧ್ಯಮಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದಾಗಿ ದೇಶದ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ. ಇದಕ್ಕೆ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳು ಬಂಡವಾಳಗಾರರ ಹಿಡಿತದಲ್ಲಿರುವುದು. ಬಂಡವಾಳಗಾರರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಲೇಖನಗಳು, ವರದಿಗಳು ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ. ಅನಕ್ಷರಸ್ಥರನ್ನೂ, ಹಳ್ಳಿ ಹಳ್ಳಿಯನ್ನೂ ತಲುಪಬಲ್ಲ ಪ್ರಭಾವಿ ಮಾಧ್ಯಮವಾದ ಟಿವಿ ಮಾಧ್ಯಮವಂತೂ ಅತ್ಯಂತ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ ಅನಕ್ಷರಸ್ಥರನ್ನೂ, ಪ್ರತಿ ಹಳ್ಳಿ ಹಳ್ಳಿಯನ್ನೂ ತಲುಪಬೇಕಾದ ಪರ್ಯಾಯ ಮಾಧ್ಯಮಗಳು ಹುಟ್ಟದ ಹೊರತು ದೇಶದ ಸ್ಥಿತಿ ಬದಲಾವಣೆಯಾಗುವ ಸಂಭವವಿಲ್ಲ. ಕನ್ನಡದಲ್ಲಿ ಎಷ್ಟೊಂದು ಟಿವಿ ವಾಹಿನಿಗಳು ಇಂದು ಹುಟ್ಟಿಕೊಂಡಿವೆಯಾದರೂ ಜನಪರ ನಿಲುವಿನ ಒಂದೇ ಒಂದು ಟಿವಿ ವಾಹಿನಿ ಇಲ್ಲ. ಈ ಶೂನ್ಯವನ್ನು ತುಂಬಿಸುವುದು ಹೇಗೆ ಎಂಬುದು ಚಿಂತಿಸಬೇಕಾದ ವಿಚಾರ. ಈಗ ಬಂಡವಾಳಗಾರರ ಹಿಡಿತದಲ್ಲಿರುವ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಮಂದಿಗೆ ದೇಶದ ಹಾಗೂ ಜನಸಾಮಾನ್ಯರ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಇಲ್ಲ. ಹೀಗಾಗಿ ಇವುಗಳಲ್ಲಿ ಕೆಲಸ ಮಾಡುವ ಮಂದಿಯಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಜೀವನೋಪಾಯಕ್ಕಾಗಿ ಬೇರೆ ಯಾವುದಾದರೂ ಗಟ್ಟಿಯಾದ ಆಧಾರವಿರುವ ಮಂದಿ ಒಟ್ಟಾಗಿ ತಮ್ಮ ಬಿಡುವಿನ ವೇಳೆಯನ್ನು ಪರ್ಯಾಯ ಮಾಧ್ಯಮ ರೂಪಿಸುವತ್ತ ಉಪಯೋಗಿಸಿದರೆ ಇಂಥ ವಿಕಾರ ಪರಿಸ್ಥಿತಿ ಸ್ವಲ್ಪವಾದರೂ ಸುಧಾರಿಸಬಹುದು.

    Reply
  2. Prashanth Mirle

    ಸಮಾಜದ ಸ್ವಾಸ್ಥ್ಯ ಕಾಪಾಡಲು ನಿಮ್ಮಂತಹವರ ಶ್ರಮ ಶ್ಲಾಘನೀಯ….. ಪತ್ರಕರ್ತರೆನ್ನಿಸಿಕೊಳ್ಳುವವರು ತಮ್ಮ ವೃತ್ತಿಧರ್ಮವನ್ನು ಮರೆತಾಗ ಸಮಾಜದ ಅನಾರೋಗ್ಯಕ್ಕೆ ಮೂಲಕಾರಣ ಎಂದು ಗುರುತಿಸುವುದರಲ್ಲಿ ಈ ಸನ್ನಿವೇಷವು ಸಹ ಪ್ರಾಸಂಗಿಕ ಉದಾಹರಣೆಗೆ ಹೇಳಿ ಮಾಡಿಸಿದಂತೆ ಇದೆ. ಮಾಧ್ಯಮ ಪ್ರಪಂಚದಲ್ಲಿ ವಿವಿಧ ಬಗೆಯ ಮೂಲಕ ಜನರಿಗೆ ತಲುಪಿಸುತ್ತಿರುವ ಪ್ರತ್ಯೇಕ ಚಾನಲ್ಗಳು, ದಿನಪತ್ರಿಕೆಗಳು, ರೇಡಿಯೋಗಳು ಸಮಾಜದ ಒಂದು ಅಂಗ ಇವುಗಳು ಕೆಲವೇ ವ್ಯಕ್ತಿಗಳ ಹಿಡಿತಕ್ಕೆ ಒಳಪಡುವುದು ಮತ್ತು ಅವುಗಳನ್ನು ಪ್ರಶ್ನಿಸದಿರುವುದು ನಮ್ಮ ಅಸಮಾರ್ಥ್ಯವೇ ಸರಿ.

    Reply
  3. Dinesh Patwardhan

    pratibhatane ! yaara virudda ? patrakartaru ennobbara pratibhatane bagge saalu, saalu bareya beeke horatu avaru pratibhatisuvnttilla. ondomme antha aase eddare kelsa bittu maadalu addi illa.illadalli kelsa aadageye hooguttade, ayke nimmadu !?

    Reply
  4. Pingback: ಸುದ್ದಿಮನೆ ಮುಖ್ಯಾಂಶಗಳು – 22 ಅ. « ಕಾಲಂ9 * column9 * Kannada media

  5. Pingback: ವರ್ತಮಾನ – Vartamaana

  6. Anonymous

    journalism has become another employment. any body can become journalist now a days ! they do not have proper knowledge. they do not have respect for their job. no dedication in their work. no professional ethics. most of them enjoy,or rather misuse their powers. totally journalism has lost its value. really pathetic.

    Reply
  7. Pingback: ಸುದ್ದಿಮನೆಯ ದೂಸೆಯೂ ತೂತೆ « ವರ್ತಮಾನ – Vartamaana

  8. Pingback: ಸುದ್ದಿಮನೆಯ ದೋಸೆಯೂ ತೂತೆ « ವರ್ತಮಾನ – Vartamaana

  9. anonymous

    ರವಿಕೃಷ್ಣಾ ರೆಡ್ಡಿಯವರೇ ಪತ್ರಿಕಾರಂಗದ ಹುಳುಕುಗಳನ್ನು ಕುರಿತ ನಿಮ್ಮ ಲೇಖನ ಸಮಯೋಚಿತವಾಗಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಿಕಾರಂಗದ ಹುಳುಕುಗಳನ್ನು ತಿದ್ದಲು ಮಾತ್ರ ಯಾರಿಗೂ ಸಾಧ್ಯವಿಲ್ಲ.ಪತ್ರಿಕೋದ್ಯೋಗಿಗೆ ಅನ್ಯಾಯವಾದಾಗ, ಯಾವುದೋ ಅಸಮರ್ಥನೀಯ ಕಾರಣದ ಮೇಲೆ ಉದ್ಯೋಗಕ್ಕೆ ಕುತ್ತು ಬಂದಾಗ ಅದರ ವಿರುದ್ಧ ಸೊಲ್ಲೆತ್ತುವ ಗಂಡುಗಲಿ ಪತ್ರಕರ್ತ ಪತ್ರಿಕಾರಂಗದಲ್ಲಿ ಇನ್ನೂ ಹುಟ್ಟಿಲ್ಲ.ಏಕೆಂದರೆ ತಮ್ಮ ಕೆಲಸ ಹೋಗುತ್ತದೆಂಬ ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ.ಬೇರೆ ಸಂಸ್ಥೆಗಳಲ್ಲಿರುವ ರೀತಿಯಲ್ಲಿ ಪತ್ರಿಕಾರಂಗದಲ್ಲಿ ಪತ್ರಕರ್ತರ ಸಂಘವಿದೆ. ಆದರೆ ಅದು ನಾಮಕಾವಸ್ಥೆಗೆ ಮಾತ್ರ ಇರುವಂತೆ ಕಾಣುತ್ತಿದೆ.

    Reply

Leave a Reply

Your email address will not be published. Required fields are marked *