ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

2 thoughts on “ವ್ಯಂಗ್ಯ (ವಿ)ಚಿತ್ರ

  1. Vishalamathi N K

    ನಮ್ಮ ಪುಸ್ತಕದ ಬಗ್ಗೆ ಬರೆದ ಎರಡು ಮಾತುಗಳನ್ನು ಬರೆದ ಕೆ. ಎಲ್. ಚಂದ್ರಶೇಖರ್ ಐಜೂರು ಅವರಿಗೆ ಅದನ್ನು ಪ್ರಕಟಿಸಿದ ವರ್ತಮಾನ ಡಾಟ್ ಕಾಮ್ ಗೆಳೆಯರಿಗೆ ಧನ್ಯವಾದಗಳು.
    -ವಿಶಾಲಮತಿ (ಚಿಂತನ ಪುಸ್ತಕ)

    Reply
  2. Pingback: ವರ್ತಮಾನ ಡಾಟ್ ಕಾಮ್ ನಲ್ಲಿ ನಮ್ಮ ಪುಸ್ತಕದ ವಿಮರ್ಶೆ « ಚಿಂತನ ಪುಸ್ತಕ

Leave a Reply

Your email address will not be published. Required fields are marked *